Wednesday, March 31, 2010

ಅನಿವಾಸಿ ಭಾರತೀಯರ ಉಳಿತಾಯಕ್ಕೆ ಕೊಡಲಿ ಪೆಟ್ಟು






ಅನಿವಾಸಿ ಭಾರತೀಯರಿಗೆ ನಮ್ಮ ಭಾರತ ಸರಕಾರವು ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕೊಡಲಿ ಏಟು ನೀಡುತ್ತಾ ಬಂದಿದೆ. ಅದಕ್ಕೆ ಪೂರಕವೆಂಬಂತೆ ಇದೀಗ ಮತ್ತೊಂದು ಏಟು ತಯಾರಾಗಿದೆ.

ಅದೆಂದರೆ ಯಾವುದೇ ಅನಿವಾಸಿ ಭಾರತೀಯ ಎನ್ ಆರ್‌ಓ (ನಾನ್ ರೆಸಿಡೆಂಟ್ ಆರ್ಡಿನರಿ) ಖಾತೆಯಲ್ಲಿ ಉಳಿತಾಯ ರೂಪದಲ್ಲಿ ಹಣ ಹೂಡಿರುವುದಾದಲ್ಲಿ ಎಪ್ರಿಲ್ ತಿಂಗಳ 1 ನೇ ತಾರೀಕಿನ ಮೊದಲು ಪಾನ್ ನಂಬರನ್ನು ತಮ್ಮ ಖಾತೆಗಳಿರುವ ಆಯಾ ಬ್ಯಾಂಕು ಗಳಿಗೆ ಪೂರೈಸತಕ್ಕದ್ದು. ತಪ್ಪಿದಲ್ಲಿ ಆತ ಹೂಡಿದ ಉಳಿತಾಯದಿಂದ ಶೇ.30 ಆದಾಯ ತೆರಿಗೆ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ!

ಸಂಬಂಧಪಟ್ಟ ಬ್ಯಾಂಕುಗಳು ಅದರ ಖಾತೆದಾರರಿಗೆ ಈಗಾಗಲೇ ಈ ಬಗ್ಗೆ ಸೂಚನೆಗಳನ್ನು ರವಾನಿಸಿಯಾಗಿದೆ. ಆದರೂ ಅಕಸ್ಮಾತ್ ವಿದೇಶದಲ್ಲಿರುವ ಯಾವುದೇ ಒಬ್ಬ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಬ್ಯಾಂಕಿನ ಸೂಚನೆ ತಲುಪಿಲ್ಲವಾದಲ್ಲಿ ಅಥವಾ ಆತ ಈಗಾಗಲೇ ಪಾನ್ ಕಾರ್ಡ್ ಹೊಂದಿಲ್ಲವಾದಲ್ಲಿ (ಖಂಡಿತ ಬಹುತೇಕ ಮಂದಿ ಈ ತನಕ ಪಾನ್ ಕಾರ್ಡ್ ಹೊಂದಿಲ್ಲ), ಪಾನ್ ಕಾರ್ಡಿಗಾಗಿ ಪ್ರಯತ್ನಿಸಿ ಅದನ್ನು ಪಡೆದು ಸೂಚಿಸಲ್ಪಟ್ಟಿರುವ ಅವಧಿಗೆ ಮೊದಲು ಅದರ ನಂಬರ ನ್ನು ಸಂಬಂಧಪಟ್ಟ ಬ್ಯಾಂಕಿಗೆ ಪೂರೈಸಲಾಗದಿದ್ದಲ್ಲಿ ಆತ ಕಷ್ಟಪಟ್ಟು ಸಂಪಾದಿಸಿ ಉಳಿತಾಯ ಮಾಡಿದ್ದ ಹಣದಿಂದ ಶೇ. ೩೦ ಹೇಳಹೆಸರಿಲ್ಲದೇ ಮಾಯವಾಗುವುದು ಖಂಡಿತ.

ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಎನ್‌ಆರ್‌ಇ (ನಾನ್ ರೆಸಿಡೆಂಟ್ ಎಕ್ಸ್‌ಟರ್ನಲ್) ಖಾತೆ ಯಲ್ಲಿ ಡಿಪಾಸಿಟ್ ರೂಪದಲ್ಲಿ ಹಣ ತೊಡಗಿಸಿದರೆ ಪ್ರಸ್ತುತ ದರದಲ್ಲಿ ಹೂಡಿಕೆದಾರನಿಗೆ ಲಭಿಸು ವುದು ಶೇ. ೩.೨೫ ಬಡ್ಡಿ ಮಾತ್ರ. ಅದನ್ನೇ ಎನ್‌ಆರ್‌ಓ ರೂಪಕ್ಕೆ ಪರಿವರ್ತಿಸಿ ಹೂಡಿಕೆ ಮಾಡಿದ್ದಲ್ಲಿ ಅದಕ್ಕೆ ಅನ್ವಯವಾಗುವ ತೆರಿಗೆ ಪಾವತಿಸಿದ ಅನಂತರವೂ ಲಭಿಸುವ ಬಡ್ಡಿಯಿಂದ ನಾಲ್ಕು ಕಾಸು ಹೆಚ್ಚು ಸಿಗಬಹುದೆಂಬ ನಿರೀಕ್ಷೆ ಅನಿವಾಸಿ ಜನತೆಯಲ್ಲಿತ್ತು.

ಆದರೆ ಈಗ ಅದಕ್ಕೂ ಬಲವಾದ ಏಟು ನೀಡಲು ಸರಕಾರದ ಇಲಾಖೆ ಕೊಡಲಿ ಸಿದ್ಧತೆ ಮಾಡಿ ಯಾಗಿದೆ. ಸರಕಾರದ ಸಿದ್ಧತೆಯೆಂದರೆ ಯಾರೊಬ್ಬರೂ ಉಸಿರೆತ್ತುವಂತಿಲ್ಲ. ಕೊಡಲಿಯನ್ನು ಯಾವಾಗ ಬೇಕಾದರೂ ಯಾರ ಮೇಲೂ ಪ್ರಯೋಗಿಸಬಹುದು.

ಭಾರತದಲ್ಲಿ ನಿರುದ್ಯೋಗ ರುದ್ರತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಎಲ್ಲಿಯಾದರೂ ಯಾವುದಾದರೂ ಉದ್ಯೋಗ ಮಾಡಿಕೊಂಡು ತನ್ನ ಹಾಗೂ ತನ್ನನ್ನು ಅವಲಂಬಿಸಿರುವವರ ಹೊಟ್ಟೆಗೆ ಹಿಟ್ಟು, ಮೈ ಮುಚ್ಚಲು ಬಟ್ಟೆ, ಅನಾರೋಗ್ಯಕ್ಕೆ ಔಷಧಿಗಳ ಹೊಂದಾಣಿಕೆಗಾಗಿ ನಾಲ್ಕು ಕಾಸಿನ ಸಂಪಾದನೆಗೋಸ್ಕರ ಉದ್ಯೋಗದ ಬೆನ್ನಟ್ಟಿ ವಿದೇಶವನ್ನು, ಮುಖ್ಯವಾಗಿ ಕೊಲ್ಲಿ ರಾಷ್ಟ್ರ ಸೇರುವವರು ಹಲವರು.

ಈ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುವವರೆಲ್ಲಾ ಸುಖಿಗಳಲ್ಲ. ಇದರ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತಿರುತ್ತವೆ. ತಿಂಗಳಿಗೆ ಭಾರತದ ಬರೇ ೫ ಸಾವಿರ ಸಂಬಳಕ್ಕೆ ದುಡಿ ಯುತ್ತಿರುವವರೂ ಗಲ್ಫ್ ರಾಷ್ಟ್ರಗಳಲ್ಲಿದ್ದಾರೆಂದರೆ ನಂಬಲು ಕಷ್ಟವಾದೀತು. ಆದರೂ ನಿಜ. ಈ ಸಂಬಳದಲ್ಲಿ ಆತ ಖರ್ಚು ಮಾಡುವುದೇನು... ಉಳಿತಾಯ ಮಾಡುವುದೇನು...? ಆದರೂ ವಿದೇಶದಲ್ಲಿದ್ದಾನೆ ಎಂಬ ಬಿರುದು ಮಾತ್ರ ಇದ್ದೇ ಇರುತ್ತದೆ.

ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಬಹುತೇಕ ಭಾರತೀಯರು ತಮ್ಮೆಲ್ಲ ಕುಟುಂಬ ಸದಸ್ಯರ ನ್ನು ಸ್ವದೇಶದಲ್ಲಿ ಬಿಟ್ಟು ಏಕಾಂಗಿಯಾಗಿ ದೂರದ ಮರಳುಗಾಡಿನಲ್ಲಿ ದುಡಿಯುವವರು. ಸಿಗುವ ಸಂಬಳದಲ್ಲಿ ತನ್ನ ಖರ್ಚು, ಮನೆಯ ಹಾಗೂ ಕುಟುಂಬ ಸದಸ್ಯರುಗಳ ಖರ್ಚುಗಳನ್ನು ಹಗ್ಗದ ಮೇಲೆ ನಡೆದಾಡುವ ರೀತಿಯಲ್ಲಿ ನಿಭಾಯಿಸುತ್ತಾ ಮುಂದೆ ವಿದೇಶ ಬಿಟ್ಟು ಬಂದು ಸ್ವದೇಶದಲ್ಲಿ ನೆಲೆಸುವಾಗ ಸಹಾಯವಾದೀತು ಎಂಬ ದೂರದರ್ಶಿತ್ವದಿಂದ ಉಳಿತಾಯ ಮಾಡಿದ ಹಣವನ್ನು ಯಾವುದಾದರೂ ಸರಕಾರೀ ಯೋಜನೆಯಲ್ಲಿ ಹೂಡಿಕೆ ಮಾಡಿರುತ್ತಾರೆ.

ಇಂತಹ ಉಳಿತಾಯದಿಂದ ತನ್ನ ತಾಯ್ನಾಡಿಗೆ ತನ್ನಿಂದಾದ ವಿದೇಶೀ ವಿನಿಮಯದ ಅಳಿಲ ಸೇವೆ ಎಂದೂ ಆತ ಯೋಚಿಸುತ್ತಾನೆ. ಆದರೆ ಈ ನಡುವೆ ಸರಕಾರದಿಂದ ಯಾವುದಾದರೊಂದು ರೂಪದಲ್ಲಿ ಉಳಿತಾಯದ ಲಾಭವನ್ನು ಕಡಿತಗೊಳಿಸುವ ತೀವ್ರವಾದ ಕೊಡಲಿ ಪೆಟ್ಟು ಬಿದ್ದಾಗ ಒಮ್ಮೆಲೇ ಉಳಿತಾಯ ಮಾಡಿದಾತ ತಡವರಿಸುವುದುಂಟು.

ತಾನು ಹುಟ್ಟಿದ ದೇಶಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಹವಾಮಾನದಲ್ಲಿ ರಕ್ತವನ್ನು ಬೆವರಾಗಿ ಸುರಿಸುತ್ತಾ ಸಂಪಾದಿಸಿ ಉಳಿತಾಯ ಮಾಡಿದ ಹಣದ ಭಾಗವನ್ನು ಸರಕಾರ ಕಬಳಿಸಲು ಚಾಪೆಯ ಕೆಳಗೆ ನುಸುಳಿದರೆ ತನ್ನ ಕಷ್ಟದ ಸಂಪಾದನೆಯನ್ನು ಉಳಿಸಿಕೊಳ್ಳಲು ಉಳಿತಾಯ ದಾರ ರಂಗೋಲಿಯ ಕೆಳಗೆ ನುಸುಳಲು ಯತ್ನಿಸಿದರೆ ತಪ್ಪಲ್ಲ. ಅದಕ್ಕೆ ಸರಕಾರೀ ಇಲಾಖೆಗಳೇ ಕಾರಣವಾಗುತ್ತವೆ.

ಅನಿವಾಸಿ ಭಾರತೀಯರಿಗೆ ನಮ್ಮ ಸರಕಾರ ಯಾವುದೇ ಲಾಭಕರ ಸವಲತ್ತನ್ನು ನೀಡಲು ಅಸಮರ್ಥವಾಗುವುದಾದಲ್ಲಿ ಆತ ಬೆವರಿಳಿಸಿ ಸಂಪಾದಿಸಿದ ಧನಕ್ಕೆ ಕತ್ತರಿ ಪ್ರಯೋಗ ಮಾಡಲು ಪ್ರಯತ್ನಿಸುವುದನ್ನಾದರೂ ನಿಲ್ಲಿಸುವುದು ಒಳ್ಳೆಯದು.

No comments: